ದೇಶ ಕಾಲಗಳ ಮಿತಿಗಳನ್ನು ಮೀರಿ ನಾವು ಹಿಂದಿನದನ್ನು ಮಾತ್ರವಲ್ಲ, ಸದ್ಯದ ಸತ್ಯಗಳನ್ನ್ನೂ ಕಾಣಬಲ್ಲೆವು. ಕೆಲವು ಸಾರಿಯಾದರೂ, ಅಪರೂಪವಾಗಿ.
ನನಗೆ ಹೀಗೆ ಅನ್ನಿಸಿದ್ದು ಒಂದು ರಾತ್ರಿ ನೇಪಾಳದಲ್ಲಿ. ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಶ್ರೀಲಂಕಾಗಳಿಂದ ಆಯ್ದ ಲೇಖಕರ ಜೊತೆ ನಾವು ಕೆಲವು ಭಾರತೀಯ ಲೇಖಕರೂ ಕೂಡಿ ಮೂರು ದಿನಗಳನ್ನು ಕಳೆದಿದ್ದೆವು. ನಾವು ಇಳಿದುಕೊಂಡಿದ್ದ ರೆಸಾರ್ಟಿನ ಹಿಂದೆ ಹಿಮದಿಂದ ಬೆಳಗುವ ಹಿಮಾಲಯದ ಎತ್ತರದ ಶ್ರೇಣಿಯಿತ್ತು. ನಾವು ಮಾತಾಡಲು ಕೂರುತ್ತಿದ್ದ ಹಾಲಿನಿಂದ, ರಾತ್ರೆ ಮಲಗುವ ಕೋಣೆಗಳ ಕಿಟಕಿಯಿಂದ ಹಿಮ ಹೊದ್ದ ಈ ಪರ್ವತರಾಜ ಕಾಣಿಸುತ್ತಿದ್ದ. ನಿರ್ದಿಷ್ಟ ಅಜೆಂಡಾ ಇಲ್ಲದ, ಒಟ್ಟಿಗೆ ಕೂತು ಹರಟಿ ನಮ್ಮ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಬೇಕೆಂಬ ಕೂಟ ಇದಾಗಿತ್ತು. ಸಂದರ್ಭ ಬಾಬ್ರಿ ಮಸೀದಿ ಪ್ರಕರಣದ ನಂತರದು. ಜನಾಂಗೀಯ ದ್ವೇಷದ ಕಿಚ್ಚಿನಿಂದ ನಮ್ಮ ದೇಶಗಳು ಪಾರಾಗುವುದು ಸಾಧ್ಯವೇ ಎನ್ನುವ ಆತಂಕ ನಮ್ಮನ್ನು ಒಟ್ಟಿಗೆ ತಂದಿತ್ತು.